ಹಮ್ ಆಪ್ಕೆ ಹೇ ಕೌನ್..! (ಅನುವಾದ: ನಾನು ನಿಮಗೆ ಏನು?) ೧೯೯೪ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕ ಚಲನಚಿತ್ರ. ಇದನ್ನು ಸೂರಜ್ ಬರ್ಜಾತ್ಯಾ ಬರೆದು ನಿರ್ದೇಶಿಸಿದ್ದಾರೆ. ರಾಜ್‍ಶ್ರೀ ಪ್ರೊಡಕ್ಷನ್ಸ್ ಇದನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್‌ ಖಾನ್‌ ನಟಿಸಿದ್ದಾರೆ. ಒಬ್ಬ ವಿವಾಹಿತ ದಂಪತಿಯ ಕಥೆ ಮತ್ತು ಅವರ ಕುಟುಂಬಗಳ ನಡುವಿನ ಸಂಬಂಧಗಳನ್ನು ಸಂಬಂಧಿಸುವ ಮೂಲಕ ಈ ಚಿತ್ರವು ಭಾರತೀಯ ವಿವಾಹ ಸಂಪ್ರದಾಯಗಳನ್ನು ಪ್ರಶಂಸಿಸುತ್ತದೆ; ಒಬ್ಬರ ಕುಟುಂಬಕ್ಕಾಗಿ ಒಬ್ಬರ ಪ್ರೀತಿಯನ್ನು ತ್ಯಾಗ ಮಾಡುವ ಬಗೆಗಿನ ಕಥೆ. ಈ ಚಿತ್ರವು ಇದೇ ನಿರ್ಮಾಣಶಾಲೆಯ ಒಂದು ಮುಂಚಿನ ಚಲನಚಿತ್ರವಾದ ನದಿಯಾ ಕೇ ಪಾರ್‌ನ (೧೯೮೨) ರೂಪಾಂತರವಾಗಿದೆ. ವಿಶ್ವಾದ್ಯಂತ ₹128 ಕೋಟಿಗಳಷ್ಟು ಗಳಿಸಿದ ಹಮ್ ಆಪ್ಕೆ ಹೇ ಕೌನ್..! ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಯಿತು. ವಿತರಣೆಯ ಹೊಸ ವಿಧಾನಗಳು ಮತ್ತು ಕಡಿಮೆ ಹಿಂಸಾತ್ಮಕ ಕಥೆಗಳತ್ತ ದಿಕ್ಕು ಬದಲಾವಣೆಯೊಂದಿಗೆ ಇದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಬದಲಾವಣೆಗೆ ಕೊಡುಗೆ ನೀಡಿತು. ಇದು ₹1 ಬಿಲಿಯನ್‍ಗಿಂತ ಹೆಚ್ಚು ಹಣಗಳಿಸಿದ ಭಾರತದ ಮೊದಲ ಚಲನಚಿತ್ರವಾಗಿತ್ತು ಮತ್ತು ಹಣದುಬ್ಬರಕ್ಕೆ ಸರಿಹೊಂದಿಸಿದಾಗ ೧೯೯೦ರ ದಶಕದ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರವಾಗಿದೆ. ಬಾಕ್ಸ್ ಆಫ಼ಿಸ್ ಇಂಡಿಯಾ ಇದನ್ನು "ಆಧುನಿಕ ಯುಗದ ಅತಿ ದೊಡ್ಡ ಬ್ಲಾಕ್‍ಬಸ್ಟರ್" ಎಂದು ವರ್ಣಿಸಿದೆ. ಚಿತ್ರವನ್ನು ತೆಲುಗಿನಲ್ಲಿ ಪ್ರೇಮಾಲಯಂ ಎಂದು ಡಬ್ ಮಾಡಲಾಯಿತು. ಧ್ವನಿವಾಹಿನಿಯಲ್ಲಿ, ಅಸಾಧಾರಣವಾಗಿ ದೊಡ್ಡ ಸಂಖ್ಯೆಯಾದ, ೧೪ ಹಾಡುಗಳಿವೆ ಮತ್ತು ಬಾಲಿವುಡ್ ಇತಿಹಾಸದಲ್ಲಿನ ಅತಿ ಜನಪ್ರಿಯ ಧ್ವನಿವಾಹಿನಿಗಳಲ್ಲಿ ಒಂದಾಗಿದೆ. ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್ ೧೧ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಹಮ್ ಆಪ್ಕೆ ಹೇ ಕೌನ್..! ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿತು. ಜೊತೆಗೆ ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ಇದು ಭಾರತದಲ್ಲಿನ ವಿವಾಹ ಆಚರಣೆಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರಿತು, ವಿವಾಹಗಳು ಹಲವುವೇಳೆ ಈ ಚಲನಚಿತ್ರದ ಹಾಡುಗಳು ಮತ್ತು ಆಟಗಳನ್ನು ಒಳಗೊಳ್ಳುತ್ತವೆ. == ಕಥಾವಸ್ತು == ಸೋದರರಾದ ಪ್ರೇಮ್ ಮತ್ತು ರಾಜೇಶ್ ತಮ್ಮ ಹೆತ್ತವರನ್ನು ಚಿಕ್ಕವರಿದ್ದಾಗಲೇ ಕಳೆದುಕೊಂಡಿರುತ್ತಾರೆ. ಅವರು ತಮ್ಮ ಚಿಕ್ಕಪ್ಪ ಕೈಲಾಶ್ ನಾಥ್‍ನೊಂದಿಗೆ ವಾಸಿಸುತ್ತಿರುತ್ತಾರೆ. ರಾಜೇಶ್ ಕುಟುಂಬದ ವ್ಯವಹಾರವನ್ನು ನಡೆಸುತ್ತಿರುತ್ತಾನೆ ಮತ್ತು ಅವನ ಕುಟುಂಬ ಅವನಿಗಾಗಿ ಸೂಕ್ತ ವಧುವಿನ ಹುಡುಕಾಟ ನಡೆಸಿರುತ್ತದೆ. ಒಂದು ದಿನ, ಕೈಲಾಶ್ ತನ್ನ ಕಾಲೇಜಿನ ಸ್ನೇಹಿತನಾಗಿದ್ದ, ಈಗ ಪ್ರಾಧ್ಯಾಪಕನಾಗಿರುವ ಸಿದ್ಧಾರ್ಥ್ ಚೌಧರಿಯನ್ನು ಹಲವಾರು ವರ್ಷಗಳ ನಂತರ ಭೇಟಿಯಾಗುತ್ತಾನೆ. ಸಿದ್ಧಾರ್ಥ್ ಮತ್ತು ಅವನ ಹೆಂಡತಿ ಮಧುಕಲಾಗೆ ಪೂಜಾ ಮತ್ತು ನಿಶಾ ಹೆಸರಿನ ಇಬ್ಬರು ಪುತ್ರಿಯರಿರುತ್ತಾರೆ. ಸಿದ್ಧಾರ್ಥ್ ಮತ್ತು ಕೈಲಾಶ್ ರಾಜೇಶ್ ಮತ್ತು ಪೂಜಾರ ನಡುವೆ ವಿವಾಹವನ್ನು ನಿಶ್ಚಯಿಸುತ್ತಾರೆ. ತಮ್ಮ ಮೊದಲ ಭೇಟಿಯಿಂದಲೇ, ನಿಶಾ ಮತ್ತು ಪ್ರೇಮ ಒಬ್ಬರೊಡನೆ ಒಬ್ಬರು ನಿರಾತಂಕವಾಗಿ ಜಗಳವಾಡಲು ಆರಂಭಿಸುತ್ತಾರೆ, ಮತ್ತು ತಮಾಷೆ ಹಾಗೂ ಚೇಷ್ಟೆ ಪೂಜಾ ಹಾಗೂ ರಾಜೇಶ್‍ರ ಮದುವೆಯಾದ್ಯಂತ ಮುಂದುವರಿಯುತ್ತದೆ. ಪ್ರೇಮ್ ರಾಜೇಶ್‍ನ ಸ್ನೇಹಪೂರ್ಣ ನಾದಿನಿ ನಿಶಾಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುತ್ತಾನೆ. ಕಾಲ ಕಳೆದಂತೆ, ಪೂಜಾ ಮತ್ತು ರಾಜೇಶ್‍ರಿಗೆ ಒಬ್ಬರಿಗೆ ಒಬ್ಬರ ಪ್ರೀತಿಯ ಅರಿವಾಗುತ್ತದೆ, ಮತ್ತು ಪೂಜಾ ತಾಯಿಯಾಗಲಿದ್ದಾಳೆ ಎಂದು ಬಹಿರಂಗಗೊಳಿಸಲಾಗುತ್ತದೆ. ಶಿಶುವಿನ ಸನ್ನಿಹಿತವಾದ ಆಗಮನವನ್ನು ಗುರುತಿಸುವ ಸಮಾರಂಭಕ್ಕೆ ಕೈಲಾಶ್ ಮನೆಗೆ ಬರಲು ಸಿದ್ಧಾರ್ಥ್ ಮತ್ತು ಮಧುಕಲಾಗೆ ಸಾಧ್ಯವಾಗುವುದಿಲ್ಲ. ಬದಲಾಗಿ ಅವರು ನಿಶಾಳನ್ನು ಕಳಿಸುತ್ತಾರೆ. ಅವಳು ಜನ್ಮದ ವೇಳೆ ಉಪಸ್ಥಿತಳಿರುತ್ತಾಳೆ. ಈ ನಡುವೆ, ನಿಶಾ ಮತ್ತು ಪ್ರೇಮ್ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ, ಆದರೆ ಅದನ್ನು ರಹಸ್ಯವಾಗಿಡುತ್ತಾರೆ. ತಮ್ಮ ಮೊಮ್ಮಗುವಿನ ಜನನವನ್ನು ಆಚರಿಸಲು ಸಿದ್ಧಾರ್ಥ್ ಮತ್ತು ಮಧುಕಲಾ ಕೈಲಾಶ್‍ನ ಮನೆಗೆ ಬರುತ್ತಾರೆ. ಬೇರ್ಪಡುವ ಸಮಯ ಬಂದಾಗ, ಅವರ ಆತಿಥೇಯರು ಖಿನ್ನರಾಗುತ್ತಾರೆ, ವಿಶೇಷವಾಗಿ ಪ್ರೇಮ್. ಅವರು ಬೇಗನೇ ಶಾಶ್ವತವಾಗಿ ಪುನಃ ಒಂದಾಗುವೆವು ಎಂದು ಅವನು ಮತ್ತು ನಿಶಾ ಒಬ್ಬರಿಗೊಬ್ಬರು ಮಾತುಕೊಡುತ್ತಾರೆ. ತನ್ನ ಹೆತ್ತವರ ಮನೆಗೆ ಬರುವಂತೆ ಪೂಜಾಳನ್ನು ಆಹ್ವಾನಿಸಲಾಗುತ್ತದೆ, ಮತ್ತು ಪ್ರೇಮ್ ಅವಳನ್ನು ಅಲ್ಲಿ ಕರೆದುಕೊಂಡು ಹೋಗುತ್ತಾನೆ. ಅವರು ಆಗಮಿಸಿದಾಗ, ಪ್ರೇಮ್ ಮತ್ತು ನಿಶಾ ಪ್ರೀತಿಸುತ್ತಿದ್ದಾರೆಂದು ಪೂಜಾಳಿಗೆ ಗೊತ್ತಾಗುತ್ತದೆ, ಮತ್ತು ಅವರ ಮದುವೆ ಮಾಡಿಸುವುದಾಗಿ ಮಾತುಕೊಟ್ಟು ನಿಶಾಳಿಗೆ ಒಂದು ಕಂಠಹಾರವನ್ನು ಗುರುತಾಗಿ ಕೊಡುತ್ತಾಳೆ. ಸ್ವಲ್ಪ ಸಮಯದ ನಂತರ, ಪೂಜಾ ಆಕಸ್ಮಿಕವಾಗಿ ಜಾರಿ ಮೆಟ್ಟಿಲುಗಳಿಮ್ದ ಕೆಳ ಬೀಳುತ್ತಾಳೆ, ಮತ್ತು ಅಂತಿಮವಾಗಿ ತಲೆಯ ಪೆಟ್ಟಿನಿಂದ ಸಾಯುತ್ತಾಳೆ. ಎಲ್ಲರೂ ಆ ದುರಂತದಿಂದ ಜರ್ಝರಿತರಾಗುತ್ತಾರೆ. ಪೂಜಾ ಮತ್ತು ರಾಜೇಶ್‍ರ ಮಗನನ್ನು ಪೂಜಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಹಾಗಾಗಿ, ನಿಶಾ ಆ ಶಿಶುವಿಗೆ ಒಳ್ಳೆ ತಾಯಿಯಾಗುವಳು ಎಂದು ಸಿದ್ಧಾರ್ಥ್ ಮತ್ತು ಕೈಲಾಶ್‍ಗೆ ಅನಿಸುತ್ತದೆ. ಅವರು ನಿಶಾಳನ್ನು ರಾಜೇಶ್‍ಗೆ ಕೊಟ್ಟು ಮದುವೆಮಾಡಲು ನಿರ್ಧರಿಸುತ್ತಾರೆ. ಸಿದ್ಧಾರ್ಥ್ ಮತ್ತು ಮಧುಕಲಾ ಕೈಲಾಶ್ ಕುಟುಂಬದೊಳಗೆ ತನ್ನ ಮದುವೆ ಬಗ್ಗೆ ಮಾತಾಡುತ್ತಿರುವುದನ್ನು ನಿಶಾ ಕದ್ದುಕೇಳುತ್ತಾಳೆ, ಮತ್ತು ಅವರು ತನ್ನ ಮತ್ತು ಪ್ರೇಮ್ ಮದುವೆಯನ್ನು ಚರ್ಚಿಸುತ್ತಿದ್ದರೆಂದು ಭಾವಿಸಿ ಅದಕ್ಕೆ ಒಪ್ಪಿಕೊಳ್ಳುತ್ತಾಳೆ. ನಂತರ, ಒಂದು ವಿವಾಹಪೂರ್ವ ಸಮಾರಂಭದಲ್ಲಿ, ತಾನು ವಾಸ್ತವವಾಗಿ ರಾಜೇಶ್‍ನನ್ನು ಮದುವೆಯಾಗಲಿದ್ದೇನೆ ಎಂದು ಅವಳಿಗೆ ತಿಳಿಯುತ್ತದೆ. ತಮ್ಮ ಪ್ರೀತಿಯನ್ನು ರಾಜೇಶ್ ಮತ್ತು ಅವನ ಮಗನಿಗಾಗಿ ತ್ಯಾಗ ಮಾಡಲು ಪ್ರೇಮ್ ಮತ್ತು ನಿಶಾ ಪ್ರತಿಜ್ಞೆ ಮಾಡುತ್ತಾರೆ. ವಿವಾಹಕ್ಕೆ ಕೆಲವು ಕ್ಷಣಗಳ ಮುಂಚೆ, ಪೂಜಾ ತನಗೆ ಕೊಟ್ಟ ಕಂಠಹಾರ, ಜೊತೆಗೆ ಪತ್ರವನ್ನು ಪ್ರೇಮ್‍ಗೆ ಕೊಡುವಂತೆ ನಿಶಾ ಪ್ರೇಮ್‍ನ ನಾಯಿ ಟಫ಼ಿಗೆ ಹೇಳುತ್ತಾಳೆ. ಟಫ಼ಿ ನಿಶಾಳ ಕೋಣೆಯಿಂದ ಹೊರಬಂದು ಪತ್ರವನ್ನು ಪ್ರೇಮ್‍ಗೆ ಕೊಡುವ ಬದಲು ರಾಜೇಶ್‍ಗೆ ಕೊಡುತ್ತದೆ. ರಾಜೇಶ್ ಪತ್ರವನ್ನು ಓದಿ ಪ್ರೇಮ್ ಮತ್ತು ನಿಶಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆಂದು ಅರಿತುಕೊಳ್ಳುತ್ತಾನೆ. ತರುವಾಯ, ಅವನು ಮದುವೆಯನ್ನು ನಿಲ್ಲಿಸಿ ನಿಶಾ ಮತ್ತು ಪ್ರೇಮ್ ಇಬ್ಬರನ್ನೂ ಎದುರಾಗುತ್ತಾನೆ. ಕೊನೆಯಲ್ಲಿ, ಪ್ರೇಮ್ ಮತ್ತು ನಿಶಾ ತಮ್ಮ ಕುಟುಂಬಗಳ ಅನುಮತಿಯೊಂದಿಗೆ ಒಬ್ಬರನ್ನೊಬ್ಬರು ಮದುವೆಯಾಗುತ್ತಾರೆ. == ಪಾತ್ರವರ್ಗ == ಟೆಂಪ್ಲೇಟು: listingಟೆಂಪ್ಲೇಟು: == ತಯಾರಿಕೆ == ನಿರ್ದೇಶಕ/ಬರಹಗಾರ ಸೂರಜ್ ಬರ್ಜಾತ್ಯಾ ಹಮ್ ಆಪ್ಕೆ ಹೇ ಕೌನ್..! ಚಿತ್ರದ ಚಿತ್ರಕಥೆಯನ್ನು ಬರೆಯಲು ಒಂದು ವರ್ಷ ಒಂಭತ್ತು ತಿಂಗಳು ಮೀಸಲಿಟ್ಟರು. ಇವರ ತಂದೆ ರಾಜ್‍ಕುಮಾರ್ ಬರ್ಜಾತ್ಯಾ ತಮ್ಮ ಕುಟುಂಬದ ಕಂಪನಿ ರಾಜ್‍ಶ್ರೀ ಪ್ರೊಡಕ್ಷನ್ಸ್‌ನ ಮುಂಚಿನ ಕೊಡುಗೆಗಳಲ್ಲಿ ಒಂದನ್ನು ಬೇರೆ ರೀತಿಯಲ್ಲಿ ಪ್ರಸ್ತುತಪಡಿಸುವ ಸಲಹೆ ನೀಡಿದರು. ಆಗ ಹಮ್ ಆಪ್ಕೆ ಹೇ ಕೌನ್..! ಅವರ ೧೯೮೨ರ ನಿರ್ಮಾಣವಾದ ನದಿಯಾ ಕೇ ಪಾರ್‌ನ ಸಡಿಲ ರೂಪಾಂತರವಾಯಿತು. ಕೆಲವು ಸಂದರ್ಭಗಳನ್ನು ಕ್ಲೀಷೆಯ ರೀತಿಯಲ್ಲಿ ನಿರೂಪಿಸುವುದನ್ನು ತಪ್ಪಿಸಲು ಬರ್ಜಾತ್ಯಾ ಸಂಗೀತಾಭಿನಯಗಳನ್ನು ಬಳಸಿದರು. ಇದರಿಂದಾಗಿ ಬಹಳ ಹಾಡುಗಳಾಗಿ ಚಿತ್ರದ ಆರಂಭಿಕ ಪ್ರದರ್ಶನಗಳ ವೇಳೆ ಚಿತ್ರದ ಉದ್ದ ಮತ್ತು ಹಾಡುಗಳ ಸಂಖ್ಯೆಗೆ ಸಂಬಂಧಿಸಿದಂತೆ ದೂರುಗಳು ಬಂದವು. ಆ ಸಮಯದಲ್ಲಿ ಏನು ಜನಪ್ರಿಯವಾಗಿತ್ತೊ ಅದಕ್ಕೆ ವಿಭಿನ್ನವಾಗಿ ಕಥೆಯನ್ನು ರಚಿಸಲಾಗಿತ್ತು. ಯಾವುದೇ ಖಳನಾಯಕರಿರಲಿಲ್ಲ, ಹಿಂಸೆಯಿರಲಿಲ್ಲ, ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಸಂಘರ್ಷಗಳಿರಲಿಲ್ಲ. ಪರಿಕಲ್ಪನೆಯಿಂದ ಸಿದ್ಧ ಉತ್ಪನ್ನದವರೆಗೆ, ಚಿತ್ರವು ನಾಲ್ಕು ವರ್ಷಗಳನ್ನು ತೆಗೆದುಕೊಂಡಿತು. ನಿಶಾಳ ಪಾತ್ರವಹಿಸಿದ್ದಕ್ಕಾಗಿ ಮಾಧುರಿ ದೀಕ್ಷಿತ್‍ಗೆ ₹೨,೭೫,೪೦,೦೦೦ ರ ಸಂಭಾವನೆ ನೀಡಲಾಯಿತು. ಪ್ರೇಮ್ ಪಾತ್ರವನ್ನು ಮೊದಲು ಆಮಿರ್ ಖಾನ್‌‍ಗೆ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದ ಮೇಲೆ ಅದು ಸಲ್ಮಾನ್‍ರಿಗೆ ಹೋಯಿತು ಮತ್ತು ಅವರು ಸೂಪರ್‌ಸ್ಟಾರ್ ಆಗಲು ನೆರವಾಯಿತು. ನಿರ್ಮಾಪಕರು/ವಿತರಕರು ತಮ್ಮ ಕೆಲಸದ ಮೇಲೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣವನ್ನು ಚಲಾಯಿಸಿದರು. ಸೀಮಿತ ಬಿಡುಗಡೆ, ಟಿವಿ ಪ್ರಚಾರದ ಹೊಸ ರೂಪ, ವೀಡಿಯೊ ಕೃತಿಚೌರ್ಯದ ವಿರುದ್ಧ ರಕ್ಷಣೆ, ಮತ್ತು ವೀಡಿಯೊ ಟೇಪ್‍ಗಳ ಬಿಡುಗಡೆಯಲ್ಲಿ ವಿಳಂಬವಿತ್ತು. == ಧ್ವನಿವಾಹಿನಿ == ಹಮ್ ಆಪ್ಕೆ ಹೇ ಕೌನ್..! ಚಿತ್ರದ ಧ್ವನಿವಾಹಿನಿಯನ್ನು ರಾಮ್‍ಲಕ್ಷ್ಮಣ್ (ಮೂಲ ಹೆಸರು ವಿಜಯ್ ಪಾಟೀಲ್) ಸಂಯೋಜಿಸಿದ್ದರು. ಹಾಡುಗಳಿಗೆ ಸಾಹಿತ್ಯವನ್ನು ರವೀಂದರ್ ರಾವಲ್ ಮತ್ತು ದೇವ್ ಕೋಹ್ಲಿ ಬರೆದಿದ್ದಾರೆ. ಈ ಧ್ವನಿವಾಹಿನಿಯನ್ನು ಸಾ ರೆ ಗಾ ಮಾ (ಅಂದಿನ ಹೆಸರು ಎಚ್ಎಮ್‍ವಿ) ಹೆಸರುಪಟ್ಟಿ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಧ್ವನಿವಾಹಿನಿಯಲ್ಲಿ ಲತಾ ಮಂಗೇಶ್ಕರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕುಮಾರ್ ಸಾನು, ಉದಿತ್ ನಾರಾಯಣ್, ಶೈಲೇಂದ್ರ ಸಿಂಗ್, ಶಾರದಾ ಸಿನ್ಹಾ ಮುಂತಾದ ಅನುಭವಿ ಗಾಯಕರು ಹಾಡಿದ್ದಾರೆ. ಕಥೆ ಬರೆಯುವ ವೇಳೆ ರಾಮ್‍ಲಕ್ಷ್ಮಣ್ ನಿರ್ದೇಶಕ ಬರ್ಜಾತ್ಯಾರೊಂದಿಗೆ ಸುಮಾರು ೫೦ ಭೇಟಿಗಳನ್ನು ನಡೆಸಿದರು. "ದೀದಿ ತೇರಾ ದೇವರ್ ದೀವಾನಾ" ಹಾಡು ನಸ್ರತ್ ಫತೇ ಅಲಿ ಖಾನ್‍ರ ಹಾಡು "ಸಾರೆ ನಬಿಯಾನ್" ದಿಂದ ಸ್ಫೂರ್ತಿಪಡೆದಿದೆ ಎಂದು ಹೇಳಲಾಗಿದೆ. ಆ ಹಾಡು ಸಾರ್ವಕಾಲಿಕ ಅತಿ ಜನಪ್ರಿಯ ಹಾಡುಗಳಲ್ಲಿ ಒಂದೆನಿಸಿಕೊಂಡಿತು. ಬಿಡುಗಡೆಯಾದ ನಂತರ ಧ್ವನಿವಾಹಿನಿಯು ಬಹಳ ಯಶಸ್ವಿಯಾಯಿತು ಮತ್ತು ೧೨ ದಶಲಕ್ಷ ಪ್ರತಿಗಳು ಮಾರಾಟವಾದವು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶೆಗಳು === ಹಮ್ ಆಪ್ಕೆ ಹೇ ಕೌನ್..! ಬಹುಮಟ್ಟಿಗೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. === ಪ್ರಶಸ್ತಿ ಗೌರವಗಳು === ಹಮ್ ಆಪ್ಕೆ ಹೇ ಕೌನ್..! ಹಿತಕರ ಮನೋರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು. ಈ ಚಿತ್ರವು ೧೩ ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಐದು ಪ್ರಶಸ್ತಿಗಳನ್ನು ಗೆದ್ದು ಆ ವರ್ಷದ ಅತಿ ಪ್ರಮುಖ ವಿಜೇತರಲ್ಲಿ ಒಂದೆನಿಸಿಕೊಂಡಿತು. "ದೀದಿ ತೇರಾ ದೇವರ್ ದೀವಾನಾ" ಹಾಡಿಗಾಗಿ ಲತಾ ಮಂಗೇಶ್ಕರ್ ಆ ವರ್ಷ ಸಾರ್ವಜನಿಕ ಬೇಡಿಕೆಯ ಕಾರಣ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಯನ್ನು ಪಡೆದರು. == ವಿಶ್ಲೇಷಣೆ == ಲೇಖಕ ಕೋವಿದ್ ಗುಪ್ತಾ ಹಮ್ ಆಪ್ಕೆ ಹೇ ಕೌನ್..! ವನ್ನು ಸಾಂಪ್ರದಾಯಿಕತೆ ಮತ್ತು ಆಧುನಿಕತೆ ನಡುವಿನ ಅಂತರವನ್ನು ಕಡಿಮೆಮಾಡುವ ಚಿತ್ರವೆಂದು ವರ್ಗೀಕರಿಸಿದರು. ತೇಜಸ್ವಿನಿ ಗಂಟಿ ಮಕ್ಕಳು ತಮ್ಮ ಕುಟುಂಬಗಳ ಒಳ್ಳೆಯದಕ್ಕಾಗಿ ತಮ್ಮ ಪ್ರೀತಿಯನ್ನು ಹೇಗೆ ತ್ಯಾಗಮಾಡಲು ಸಿದ್ಧರಿರುತ್ತಾರೆ ಎಂಬುದರ ಸಂಬಂಧವಾಗಿ ಚಿತ್ರವನ್ನು ಮಕ್ಕಳ ಕರ್ತವ್ಯದ ಪ್ರಶಂಸಾಗೀತೆಯೆಂದು ಕರೆದರು. ಚಿತ್ರದಲ್ಲಿನ ಕೌಟುಂಬಿಕ ಸಂಬಂಧಗಳು ಅವುಗಳ ಪರಸ್ಪರ ವಿನಯಶೀಲತೆಯ ಕಾರಣ ಸಾಮಾನ್ಯ ಸಿನಿಮಾ ಕುಟುಂಬಗಳಿಂದ ಭಿನ್ನವಾಗಿವೆ ಎಂದೂ ಗಮನಿಸಲಾಗಿದೆ. == ಚಿತ್ರದ ಕೊಡುಗೆ ಮತ್ತು ಪ್ರಭಾವ == ಹಮ್ ಆಪ್ಕೆ ಹೇ ಕೌನ್..! ಚಿತ್ರವನ್ನು ಹಿಂದಿ ಚಲನಚಿತ್ರಗಳ ಬಾಕ್ಸ್ ಆಫ಼ಿಸ್ ಇತಿಹಾಸದಲ್ಲಿ ಭಿನ್ನ ಕ್ಷಣವಾಗಿರುವುದಕ್ಕೆ, ಮತ್ತು ಭಾರತೀಯ ಚಲನಚಿತ್ರ ವಿತರಣಾ ವ್ಯವಸ್ಥೆಯಲ್ಲಿ ಕ್ರಾಂತಿಯ ಆರಂಭವಾಗಿರುವುದಕ್ಕೆ ಗುರುತಿಸಲಾಗಿದೆ. ಈ ಚಿತ್ರ ಬಿಡುಗಡೆಯಾದಾಗ, ಸುಧಾರಿತ ಕೇಬಲ್ ಟಿವಿ, ಗೃಹ ವೀಡಿಯೊ ಮತ್ತು ಚಲನಚಿತ್ರ ಕೃತಿಚೌರ್ಯದ ಕಾರಣ ಭಾರತದಲ್ಲಿ ಸಿನಿಮಾ ಪತನವಾಗುತ್ತಿತ್ತು. ಆರಂಭದಲ್ಲಿ ಸೌಲಭ್ಯಗಳನ್ನು ಉನ್ನತೀಕರಿಸಲು ಒಪ್ಪಿಕೊಂಡ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ವ್ಯಾಪಕ ಬೇಡಿಕೆ ಸಿಕ್ಕಂತೆ, ಚಿತ್ರವನ್ನು ಪಡೆದುಕೊಳ್ಳಲು ಅನೇಕ ಇತರ ಚಿತ್ರಮಂದಿರಗಳು ಸೌಕರ್ಯಗಳಲ್ಲಿ ಸುಧಾರಣೆ ಮಾಡಿಕೊಂಡವು. ಟಿಕೆಟ್ ಬೆಲೆ ಹೆಚ್ಚಿದ್ದರೂ, ಹೆಚ್ಚು ಸೌಕರ್ಯಗಳಿದ್ದ ಕಾರಣ ಜನರು ಚಿತ್ರಮಂದಿರಗಳಿಗೆ ಬಂದರು. ಜೊತೆಗೆ, ಚಿತ್ರದಲ್ಲಿ ಅಶ್ಲೀಲತೆ ಇಲ್ಲದ ಕಾರಣ ಮಧ್ಯಮ ವರ್ಗದ ಕುಟುಂಬ ಗ್ರಾಹಕರಿಗೆ ಇದು ಚಿತ್ರಮಂದಿರಕ್ಕೆ ಮರಳುವುದಕ್ಕೆ ಚಿಹ್ನೆಯಾಯಿತು. ಹಮ್ ಆಪ್ಕೆ ಹೇ ಕೌನ್..! ನಂತರದ ಅನೇಕ ಹಿಂದಿ ಚಲನಚಿತ್ರಗಳ ಮೇಲೆ ಪ್ರಭಾವಬೀರಿತು. ಈ ಚಿತ್ರವು ಮನಮೋಹಕ ಕೌಟುಂಬಿಕ ನಾಟಕಚಿತ್ರ ಮತ್ತು ಎನ್ಆರ್‌ಐ ಸಂಬಂಧಿತ ಚಲನಚಿತ್ರಗಳಿಗೆ ಮಾರ್ಗ ಪ್ರವರ್ತಕವಾಯಿತು. ಯಾವುದೇ ಮದುವೆಯು ಈ ಚಿತ್ರದ ಕೆಲವು ಹಾಡುಗಳಿಲ್ಲದೇ ಪೂರ್ಣವಾಗುವುದಿಲ್ಲ, ಮತ್ತು ವಿವಾಹದ ಯೋಜನೆಗಳನ್ನು ವಿನ್ಯಾಸಗೊಳಿಸಲು ಈ ಚಿತ್ರವನ್ನು ಕಥೆಯಾಗಿ ಬಳಸಲಾಗಿದೆ. ಮುಂದಿನ ಅನೇಕ ವರ್ಷಗಳವರೆಗೆ, "ದೀದಿ ತೇರಾ ದೇವರ್ ದೀವಾನಾ" ಹಾಡಿನಲ್ಲಿ ಮಾಧುರಿ ದೀಕ್ಷಿತ್ ಧರಿಸಿದ ನೇರಳೆಬಣ್ಣದ ಸೀರೆಯಂತಿರುವ ಸೀರೆಯನ್ನು ಧರಿಸಲು ಮಹಿಳೆಯರು ಬಯಸಿದರು. == ಉಲ್ಲೇಖಗಳು == == ಗ್ರಂಥಸೂಚಿ == == ಹೊರಗಿನ ಕೊಂಡಿಗಳು == ..! @ ಐ ಎಮ್ ಡಿ ಬಿ ಟೆಂಪ್ಲೇಟು: ಟೆಂಪ್ಲೇಟು: ..! ..! ..!: 2 : - 42